ನಿವೆನ್, ಡೇವಿಡ್
	1910-1983. ಹಾಲಿವುಡ್ ಚಿತ್ರನಟ. ಹುಟ್ಟಿದ್ದು ಸ್ಕಾಟ್ಲೆಂಡಿನಲ್ಲಿ. ಚಿಕ್ಕಂದಿನಿಂದಲೇ ತುಂಟು ಸ್ವಭಾವದ ಈತ ಬಹುಬೇಗ ಶಾಲೆ ಬಿಡಬೇಕಾಯಿತು. 1927ರಲ್ಲಿ ಸೈನ್ಯ ಸೇರಿ ಪ್ರಖ್ಯಾತ ಸ್ಯಾಂಡ್‍ಹಸ್ರ್ಟ್ ಮಿಲಿಟರಿ ಕಾಲೇಜಿನಲ್ಲಿ ತರಬೇತಿ ಪಡೆದ. 1929ರಿಂದ 32ರ ವರೆಗೆ ಹೈಲ್ಯಾಂಡ್ ಲೈಟ್ ಇನ್‍ಫೆಂಟ್ರಿಯಲ್ಲಿ ಸೇವೆ ಸಲ್ಲಿಸಿದ. ಆಮೇಲೆ ಕೆನಡಕ್ಕೆ ಹೋಗಿ ಅಲ್ಲಿಂದ ಅಮೇರಿಕಕ್ಕೆ ವಲಸೆ ಹೋದ. ಹೊಟ್ಟೆಪಾಡಿಗಾಗಿ ಅನೇಕ ತಿಂಗಳ ಕಾಲ ಮದ್ಯ ಮಾರಾಟಗಾರನಾಗಿದ್ದ. ಸ್ವಲ್ಪಕಾಲ ಕುದುರೆ ಆಟಗಳ ವ್ಯವಸ್ಥಾಪಕನಾಗಿದ್ದ. ಅಮೆರಿಕೆಯಲ್ಲಿ ತಂಗುವಿಕೆಯ ಕಾಲಾವಧಿ (ವೀಸಾ) ಮುಗಿದಿದ್ದರಿಂದ ಮೆಕ್ಸಿಕೋಗೆ ಹೋದ. ಮತ್ತೆ ಅಮೆರಿಕಕ್ಕೆ ಬರುವ ವರಗೆ ಅಲ್ಲಿ ಹೋಟೆಲೊಂದರಲ್ಲಿ ಸೇವಕನಾಗಿ ದುಡಿದ ತನ್ನ ಅದ್ಭುತ ಭಾವಾಭಿವ್ಯಕ್ತಿ ಕೌಶಲವನ್ನು ಅರಿತಿದ್ದ ಗೆಳೆಯರು ಹಾಲಿವುಡ್‍ಗೆ ಹೋಗುವಂತೆ ಪ್ರೇರೇಪಿಸಲಾಗಿ ಈಥ ಹಾಲಿವುಡ್‍ಗೆ ಬಂದು ಎಕ್ಸ್‍ಟ್ರ ನಟನಾಗಿ ಜೀವನ ನಿರ್ವಹಿಸತೊಡಗಿದ. ಪ್ರಖ್ಯಾತ ನಿರ್ಮಾತೃ, ಸ್ಯಾಮುಯಲ್ ಗೋಲ್ಡ್‍ವಿನ್‍ನೊಂದಿಗೆ ಏಳು ವರ್ಷಗಳ ಕರಾರು ಮಾಡಿಕೊಂಡ. 27 ವೆಸ್ಟರ್ನ್ ಬಗೆಯ ಚಿತ್ರಗಳಲ್ಲಿ ಮಾತಿಲ್ಲದ ಪುಟ್ಟ ಪಾತ್ರಗಳು ಇವನ ಪಾಲಿಗೆ ಮೊದಲು ಬಂದವು. ತದನಂತರ ಮಾತಿರುವ ಸಣ್ಣ ಪುಟ್ಟ ಪಾತ್ರಗಳು. ಸ್ವಲ್ಪ ಮುಖ್ಯ ಪಾತ್ರದ ಪ್ರಥಮ ಬಾರಿಗೆ ಸ್ಪ್ಲೆಂಡರ್ (1935) ಚಿತ್ರದಲ್ಲಿ ಕಾಣಿಸಿಕೊಂಡ. ಮೊದಲ ದೊಡ್ಡ ಅವಕಾಶ ಸಿಕ್ಕಿದ್ದು ಎಂದರೆ ರೋಸ್‍ಮೇರಿ ಚಿತ್ರದಲ್ಲಿ (1936) ಚಿತ್ರದಲ್ಲಿ. ಅಂತೆಯೇ ವಿಲಿಯಂ ವೈಲರ್ ನಿರ್ದೇಶನದ ಡಾಡ್ಸ್‍ವರ್ತ್ (1936) ಚಿತ್ರವೂ ಇವನಿಗೆ ಒಳ್ಳೆಯ ಅವಕಾಶ ನೀಡಿತು. ಅಷ್ಟೇನೂ ಸುಂದರನಲ್ಲದಿದ್ದರೂ ಎತ್ತರವಾಗಿದ್ದ ಈ ವ್ಯಕ್ತಿಯನ್ನು ತೆರೆಯ ಮೇಲೆ ಕಂಡ ಜನ ಇವನಲ್ಲಿನ ನಟನಾಶಕ್ತಿಯನ್ನು ಸರಿಯಾಗಿ ಗುರುತಿಸಿದರು.

	ಎರಡನೆಯ ಮಹಾಯುದ್ಧ ಆರಂಭವಾದ ಮೇಲೆ ಸೈನ್ಯಕ್ಕೆ ಸೇರಬೇಕಾಗಿ ಬಂದು ರೈಫಲ್ ಬ್ರಿಗೇಡ್ ಹಾಗೂ ಕಮಾಂಡೊ ವಿಭಾಗದಲ್ಲಿ ಈತ ಮೇಜರ್‍ನಾದ. ಮಿತ್ರ ರಾಷ್ಟ್ರಗಳ ಸಂಯುಕ್ತ ಸೈನ್ಯಬಲದ ಮುಂಚೂಣಿಗೆ ಹೋಗಿ ಲೆಫ್ಟಿನೆಂಟ್ ಕರ್ನಲ್ ಆದ. ಇವನ ಸೈನಿಕ ಸೇವೆಗೆ ಮನ್ನಣೆ ಸಿಕ್ಕಿತು. ಅಮೆರಿಕದ ಲೀಜನ್ ಆಫ್ ಮೆರಿಟ್ ಪತ್ರ ಪಡೆದ.

	ಮತ್ತೆ ಚಿತ್ರರಂಗಕ್ಕೆ ಮರಳಿ ಹಲವಾರು ಬ್ರಿಟಿಷ್ ಚಿತ್ರಗಳಲ್ಲಿ ಪಾತ್ರವಹಿಸಿದ. ಜೊತೆಗೇ ಬ್ರಾಡ್‍ವೇ ರಂಗದಲ್ಲಿ ನೀನಾ ಹಾಗೂ ಹಾಲಿವುಡ್ ರಂಗದಲ್ಲಿ ದಿ ಮೂನ್ ಈಸ್ ಬ್ಲೂ ನಾಟಕ ಪ್ರದರ್ಶನಗಳನ್ನು ನೀಡಿದ. ಇವನ ಚಿತ್ರಗಳು ಯಶಗಳಿಸತೊಡಗಿದವು. ಹಣದ ಜೊತೆಗೆ ವಿಮರ್ಶಕ ಪ್ರಶಸ್ತಿಯೂ ಬಂತು. ದಿ ಮೂನ್ ಈಸ್ ಬ್ಲೂ (1953) ಅದ್ಭುತ ಯಶ ಗಳಿಸಿತು. ಜೂಲ್ಸ್‍ವರ್ನ್ ಕಥೆಯನ್ನು ಆಧರಿಸಿದ ಅರೌಂಡ್ ದಿ ವಲ್ರ್ಡ್ ಇನ್ 80 ಡೇಸ್(1956), ಗನ್ಸ್ ಆಫ್ ನವರೋನ್ (1961), ದಿ ಪಿಂಕ್ ಪ್ಯಾಂತರ್ (1964), ಇಂಪಾಸಿಬಲ್ ಇಯರ್ಸ್ (1968) ತುಂಬ ಜನಪ್ರಿಯವಾದವು. ಈತ ಅಪಾರ ಶ್ರಮವಹಿಸಿ ಅಭಿನಯಿಸಿದ ದಿ ಬ್ರೇನ್ (1967) ಚಿತ್ರ ಅಷ್ಟಾಗಿ ಯಶ ಕಾಣಲಿಲ್ಲ. ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಇವನಿಗೆ ಸೆಪರೇಟ್ ಟೇಬಲ್ಸ್ (1958) ಚಿತ್ರದಲ್ಲಿನ ಶ್ರೇಷ್ಠ ಅಭಿನಯಕ್ಕಾಗಿ ಆಸ್ಕರ್ ಪ್ರಶಸ್ತಿ ಬಂದಿದೆ.

	ಇವನ ಇತರ ಮುಖ್ಯ ಚಿತ್ರಗಳೆಂದರೆ: ದಿ ಪ್ರಿಸನರ್ ಆಫ್ ಜೆಂಡಾ (1937), ಬ್ಲೂ ಬಡ್ರ್ಸ್ ಎಯ್ತ್ ವೈಫ್ (1938), ವುದರಿಂಗ್ ಹೈಟ್ಸ್ (1939), ರ್ಯಾಫಲ್ಸ್ (1940), ದಿ ವೆ ಅಹೆಡ್ (1944), ಮ್ಯಾಗ್ನಿಫಿಸೆಂಟ್ ಡಾಲ್ (1946), ಬಿಷಪ್ಸ್ ವೈಫ್ (1947), ಸೋಲ್ಜರ್ಸ್ ತ್ರೀ (1951), ದಿ ಲಿಟಲ್ ಹಟ್ (1957), ಆಸ್ಕ್ ಎನಿ ಗರ್ಲ್ (1959), ಪ್ಲೀಸ್ ಡೋಂಟ್ ಈಟ್ ಡೈನೀಸ್ (1960), ಗನ್ಸ್ ಆಫ್ ಡಾರ್ಕ್‍ನೆಸ್ (1962), ಫಿಫ್ಟಿಫೈವ್ ಡೇಸ್ ಎಟ್ ಪೀಕಿಂಗ್ (1963), ಕ್ಯಾಸಿನೊ ರಾಯೇಲ್ (1967), ದಿ ಎಕ್ಸ್‍ಟ್ರಾರ್ಡಿನರಿ ಸೀಮನ್ (1969), ಬಿಫೋರ್ ವಿಂಟರ್ ಕಂಸ್ (1968).

	ಈತ ಗ್ರಂಥ ಕರ್ತನೂ ಹೌದು. ರೌಂಡ್ ದಿ ರಗೆಡ್ ರಾಕ್ಸ್ (1951) ಎಂಬ ಕಾದಂಬರಿ ರಚಿಸಿದ್ದಾನೆ. ಒನ್ಸ್ ಓವರ್ ಲೈಟ್ಲೀ (1951) ಎಂಬುದು ಮತ್ತೊಂದು ಕೃತಿ. ದಿ ಮೂನ್ ಈಸ್ ಬ್ಲೂ (1958) ಎಂಬ ಹೆಸರಿನಲ್ಲಿ ತನ್ನ ಆತ್ಮಕಥೆ ಬರೆದಿದ್ದಾನೆ. ಇತ್ತೀಚಿನ ದಿ ಮೂನ್ಸ್ ಬಲೂನ್ (1972) ಹಾಗೂ ಬ್ರಿಂಗ್ ಆನ್ ದಿ ಎಮ್ಟಿ ಹಾರ್ಸಸ್ (1975) ಕೃತಿಗಳು ಈತನ ಬೆಸ್ಟ್ ಕೃತಿಗಳು.

	ಫ್ರಾನ್ಸಿನಲ್ಲಿ ಕಂಡ ಪ್ರಿಮ್ ಎಂಬ ಯುವತಿಯನ್ನು ಪ್ರೇಮಿಸಿ ಈತ ಮದುವೆಯಾದ. ಕೆಲ ವರ್ಷಗಳಲ್ಲಿಯೇ ಅಪಘಾತಕ್ಕೊಳಗಾಗಿ ಆಕೆ ತೀರಿಕೊಂಡಳು. ಸ್ವಲ್ಪ ಕಾಲಾನಂತರ ಸ್ವೀಡಿಷ್ ಸುಂದರಿಯೊಬ್ಬಳನ್ನು ಪ್ರೇಮಿಸಿ ಮದುವೆಯಾದ. ವಿರಸ ಬಂದು ದಾಂಪತ್ಯ ಒಡೆದು ಹೋಯಿತು. ಇತ್ತೀಚಿನ ದಿನಗಳಲ್ಲಿ ಈತ ಚಲನಚಿತ್ರದ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾನೆ. ಆದರೆ ಟೆಲಿವಿಷನ್ನಿನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದಾನೆ. ದಿ ಡೇವಿಡ್ ನಿವೆನ್ ಷೋ (1957), ದಿ ರೋಗ್ಸ್ (1964) ಎಂಬ ಟಿ.ವಿ. ಚಿತ್ರಮಾಲೆ ಇಂದು ಜನಪ್ರಿಯ.					
			(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ